Saturday, October 20, 2007

ಅಂತರ್ಜಾಲದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಕನ್ನಡ ಸಾಹಿತ್ಯಾಸಕ್ತರಿಗೂ ನಮಸ್ಕಾರ.
ಇದೊಂದು ಬಗೆಯ ಅಸ್ತಿತ್ವ ವಿಕಸನ ಪ್ರಯತ್ನ. ನಮ್ಮಲ್ಲಿನ ಆಸಕ್ತಿಗಳು ಕಮರಿಹೋಗದಂತೆ ಕಾಪಾಡಿಕೊಳ್ಳುವ ಸಲುವಾಗಿ, ಮಲ್ಲಿಗೆ, ಸಂಪಿಗೆಯ ಘಮ ಬೀರದಿದ್ದರೂ, ಬೇಲಿ ಗಿಡಗಳ ಹೂಗಳ ಬರಿಯ ಬಣ್ಣದ ಬೆಡಗು ಧರಿಸುವಂತೆ ಇರುವಷ್ಟೇ ಒತ್ತಾಸೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಪರಿ.
ನಾಗಮಂಗಲದಂತಹ ಸಣ್ಣ ಊರುಗಳು ಇಂತಹ ಕೊರತೆಗಳನ್ನು ಸದಾ ಒಡ್ಡುತ್ತವೆ. ಒಂದು ಕಾದಂಬರಿಯ ಓದು, ಒಂದು ಕಾವ್ಯದ ಗುಂಗು, ಅನುಮಾನ ಇವುಗಳನ್ನು ಹಂಚಿಕೊಂಡು ಆನಂದಿಸುವ, ಚಿಂತಿಸುವ ಅವಕಾಶಗಳು ಅಲಭ್ಯವೇ. ಸಮಾನ ಆಸಕ್ತಿಯ, ಅಭಿರುಚಿಯ ಗೆಳೆಯರು ಒಟ್ಟುಗೂಡುವುದೂ ಸಹ ದುರ್ಲಭವಾಗಿರುವ ಇಂತಹ ದಿನಗಳಲ್ಲಿ, ಅಂತಹ ಅವಕಾಶಗಳ ಮರುಹುಟ್ಟಿಗಾಗಿಯಾದರೂ ಒಂದು ವೇದಿಕೆಯ ಅಗತ್ಯವಿದೆಯೆಂದು ಭಾವಿಸಿ, ಅಂತರ್ಜಾಲದಲ್ಲೊಂದು ಪ್ರಯತ್ನವನ್ನು ಕೈಗೊಂಡಿದ್ದೇವೆ. ಸೃಜನಶೀಲ ಪ್ರಕಾರಗಳಲ್ಲಿ ಆಸಕ್ತಿಯಿಂದ ತೊಡಗಿರುವ ಸ್ನೇಹಿತರ ರಚನೆಗಳನ್ನು ಸಹೃದಯರ ಆಸ್ವಾದಕ್ಕೂ, ಸಂವಾದಕ್ಕೂ ತಲುಪಿಸುವ ಅಪೇಕ್ಷೆ ನಮಗಿದೆ. ಆ ದಿಕ್ಕಿನಲ್ಲಿ ನಮ್ಮ ಪ್ರಯತ್ನವಿದೆ. ವಿಶ್ವದೆಲ್ಲೆಡೆಯ ಸಾಹಿತ್ಯಾಸಕ್ತರು ಕೈಗೂಡಿಸುವುದರೊಂದಿಗೆ ಇದು ಸಾಧ್ಯವಾಗಬಹುದು. ಆದ್ದರಿಂದಲೇ ಇದೊಂದು ಕೇವಲ ಆತ್ಮೀಯ ವಲಯದ ಪ್ರಸಾರವನ್ನುಳ್ಳ ಸಂವಹನೆ.
ಕನ್ನಡಕ್ಕಾಗಿ ತೊಡಗು ಎಂದು ಆದೇಶವಿತ್ತ ರಸಋಷಿ ಕುವೆಂಪುರವರು ಜೀವನ ಈ ನಮ್ಮ ಪ್ರಯತ್ನ ಮತ್ತು ಶ್ರದ್ಧೆಗೆ ಪೂರಕವಾಗಿರಲಿ ಎನ್ನುವ ಹಂಬಲ ನಮ್ಮಲ್ಲಿದೆ.
ಪ್ರೀತಿ ಇರಲಿ, ಪ್ರತಿ ಸ್ಪಂದನವೂ ಇರಲಿ.

Friday, October 19, 2007